ಶನಿವಾರ, ಜನವರಿ 14, 2012

ಸಂಭ್ರಮ

ಪುಟ ತಿರುವಿದಾಗೆಲ್ಲ
ಒಂದೊಂದು ಸಾಲು ಬರೆಯುತ್ತೇನೆ...
ತೆರೆಯಲು ಭಯ...ಸಾರಲು ಭಯ..
.ಮನದ ಮುಗಿಲಿಗೆ ಭೂಮಿ ಹಸಿರುಟ್ಟ ಸಂಭ್ರಮ...

ಬರೆದಾಗಲೆಲ್ಲ ಒಂದೊಂದು 
ಸೊಲ್ಲು ಸೇರಿಸುತ್ತೇನೆ..
ಸಾರಲು ಭಯ... ತಲೆದೂಗಲು ಭಯ...
ಮನದ ಬಿದಿರಿಗೆ ತಾನು ಹಾಡದ ಸಂಭ್ರಮ...

ಮೆರೆವಾಗಲೆಲ್ಲ ಒಂದೊಂದು
ಮೊರೆ ಸಲ್ಲಿಸುತ್ತೇನೆ...
ಕಾಡಲು ಭಯ... ಬೇಡಲು ಭಯ... 
ಮನದ ಗೆಜ್ಜೆಗೆ ಲಜ್ಜೆಗಳ ಹೆಜ್ಜೆಗೆ  ಎಗ್ಗಿಟ್ಟ ಸಂಭ್ರಮ...

ಬಿಕ್ಕಿ ಅಳುವಾಗೆಲ್ಲ ಹಲವು
ನಗೆಯ ಕೊಳ್ಳುತ್ತೇನೆ...
ಮಾತುಗಳ ಭಯ..ಮುರುಕು ಮೌನಗಳ ಭಯ...
ಮನದ ಹಕ್ಕಿಗೆ ನೆಲಿಯಲಿ ತೇಲಿ ತಾನ್ ಮರೆಯಾದ ಸಂಭ್ರಮ... 

ಎಲ್ಲಿ ಹೋಯಿತು ???

ಎಲ್ಲಿ ಹೋಯಿತು ???


ಎಲ್ಲಿ ಹೋಯಿತು
ನನ್ನ ಆ ಸರದ ಮುತ್ತು? 
ಎಷ್ಟು ಚಂದಿತ್ತು ಗೊತ್ತೇ?
ಕಳಕೊಂಡು ಬಿಟ್ಟೆ...

ಬೆರಳಿಗೂ ಸಾಥ್ ನೀಡುತ್ತಿತ್ತು
ಭಯವಾದಾಗ....
ಕೈಗೆ ಕೈ ಬೆಸೆಯುತ್ತಿತ್ತು 
ಖುಷಿಯಾದಾಗ...
ಯಾವಾಗಲೋ ಒಮ್ಮೆ ಜಡೆ ಮುತ್ತು ಕೂಡಾ
ಭಾನುವಾರ ಕನ್ನಡಿಯ ಮೂಲೆ ಮಾತ್ರ...

ಗೊತ್ತಿಲ್ಲ ಮುನಿಸು ನನಗೋ ಅದಕೋ...?
ಎಲ್ಲಿ ಪುಟಿಯಿತೋ  ಏನೊ 
ಕಸಕೋ ರಸಕೋ...
ವರುಷಗಳ ಮೀಲೋಮ್ಮೆ ಕಣ್ ತುಂಬಿ ಬಂದಾಗ 
ಹಸಿರೆಲೆಯ ತುದಿಯಿಂದ 
ಹನಿ ಉದುರಿ ಬಿತ್ತು....


ಎಲ್ಲಿ ಹೋಯಿತೋ ಏನೋ
ನನ್ನ ಆ ಸರದ ಮುತ್ತು....?









ಶುಕ್ರವಾರ, ಜುಲೈ 1, 2011

ಭುಜ  ಕೊಡುವೆಯಾ ?

ಭುಜ  ಕೊಡುವೆಯಾ ಗೆಳತಿ 
ನನ್ನ ಕಂಬನಿಗಳಿಗೆ ಮೌನಿಯಾಗಿ  ?
ಭಾವ ಬತ್ತಿದ ಬಿಂದುಗಳಿಗೆ ಸಾಕ್ಷಿಯಾಗಿ?
ತುತಿಯೆರಡು ಮಾಡದಿರು...
ಪ್ರವಾಹ ಬಂದುಬಿಡಲಿ,
ನನ್ನೆದೆಯ ಮಣ್ಣ ದೋಣಿ ಕರಡಿ ಬಿಡಲಿ, !
ಪ್ರಯತ್ನಿಸದಿರು ನೀ ವಿಫಲಳಾಗಿ!   
ಸಾಧ್ಯವಿಲ್ಲೆನಗೆ,ಎನ್ನ ಕಂಗಳಿಗೆ,
ಮತ್ತೆ ಕನಸ ಹೆಣೆಯಲು,
ಮುತ್ತ ಮಾಲೆ ಪೊಣಿಸಲು.,  
ಆಸೆ ಚಿತ್ರ ಬಿಡಿಸಲು...
ಭುಜ  ಕೊಡುವೆಯಾ ಗೆಳತಿ 
ನನ್ನ ಕಂಬನಿಗಳಿಗೆ ಮೌನಿಯಾಗಿ  ?
ಭಾವ ಬತ್ತಿದ ಬಿಂದುಗಳಿಗೆ ಸಾಕ್ಷಿಯಾಗಿ?


ಕಾನನ ಕುಸುಮ  

ಯಾವ ಆಸರೆಯಿಲ್ಲ ಅರಳಿನಿಂತಿಹುದು
ಬೇಸಿಗೆಯ ಬಿಸಿಲಲ್ಲಿ
 ವನದ ಸುಮವು..
ನೆಟ್ಟು ನೋಡಿಹರಿಲ್ಲ,
ನೀರನೆರೆದವರಿಲ್ಲ
ನಗುತಿಹುದು ನಿಸ್ಸಹಾಯಕವಾಗಿ  ಬೆಳೆದು!
ಮುದ್ದಿಸುವರಾರಿಲ್ಲ,
ಮುಡಿವವರು ಗತಿಯಿಲ್ಲ,
ಅಂದವೆಂದೆನ್ನುವರು ಸಿಗುವುದಿಲ್ಲ...
ಹೊರಳಿದರು ಕಣ್ಣೋಟ ಅರೆ ಮನದ ನೆಚ್ಚಿಗೆ!
ಚೆಂದದುತ್ತರ ಬರಿ ಮೂಗುಮುರಿತ...
ಎಷ್ಟೆಷ್ಟೋ ಮೆರೆಯುತಿವೆ ಮರೆಯಲ್ಲಿ ಕಲೆಗಳು,
ಅರಿವರಿಹರೆ ಬೇರೆ ಅವರಾಳದ ಫಲಗಳು ?
ಇರಬಹುದೇ ನೂರಲ್ಲಿ
ಹತ್ತು ಮೆಚ್ಚುವ ಮಂದಿ?
ಮಣ್ಓಳಗಿನಾ  ಮೊಳಕೆ ಮನದ ಭಾವ!
ದೀನ ಪ್ರತಿಭೆಯ ಗೋಳು 
ಮುಗಿಲ ಮಲ್ಲೆಯ ಕನಸು,
ಕಾಡಮಲ್ಲಿಗೆಯೆಡೆಗೂ ತಿರುಗಲಿ ಬೆರಳು..
ಬಡಮನದ  ಸಾಫಲ್ಯ ಕಾನನ ಕುಸುಮದಂತೆ,
ತೃಪ್ತಿ ತನ್ನೊಡಲೊಳಗೆ
ತಾನರಳುವಂತೆ ......
  




ಗುರುವಾರ, ಜೂನ್ 30, 2011

 ಮತ್ತಿನ್ನೇನಿದೆ 
ಬೇಸಿಗೆಯ ಬಡ ನೆಲ ಮನಸು,
ಒಂದಿಷ್ಟು ಕಳವಳ ಕುತೂಹಲ
 ಕಾರ್ಮೋಡಗಳ  ಕಂಡು....
ತಿಳಿಯದ ತಂಗಾಳಿಯ ಸನ್ನೆ,
ಆಗಾಗ ಮೊಳಗಿ ಮರೆಯಾಗುವ
ಗುಡುಗು ಮಿಂಚುಗಳ ಜಾಗಟೆ 
ಪ್ರೀತಿ ಮಾತಂತೆ 
ಇಳೆಗೆ ಮೊದಲ ಮಳೆ !
ಹಸಿರು ಎಲ್ಲೆಡೆ ಚಿಗುರಿತು 
ಮನದ ಮಂದಾರ ಅರಳಿತು!
ಮತ್ತಿನ್ನೇನಿದೆ???
ಬಿರುಬೇಸಿಗೆಯಂತೂ ದೂರಾಗತೊಡಗಿದೆ
ಬೆರಳೆಣಿಕೆಯೊಂದೇ ಬಾಕಿ,
ಸುರಿವ ಕನಸ ಮುಂಗಾರಿಗೆ....

ಶುಕ್ರವಾರ, ಜೂನ್ 10, 2011

nimisha nimishaku

ನಿಮಿಷ  ನಿಮಿಶಕು .......
ನಿಮಿಷ  ನಿಮಿಶಕು ಚೈತ್ರ
ನನ್ನೆದೆಯ ಭುವಿಯಲ್ಲಿ
ಚಿಗುರಿ ನಲಿದಿದೆ ಕನಸು
ಸುತ್ತೆಲ್ಲ ಜಾಗದಲಿ
ಹೂವರಳಿದಾ ಘಮವು
ಪ್ರತಿಯುಸಿರ  ತಾಳದಲಿ
ಜೇನ್  ಗಾನ  ಸಂಭ್ರಮದ
ಸವಿ ಬೆರಗು; 
ಅಚ್ಚರಿ ಸೊಬಗು...
ಪ್ರತಿ ಸಲಕು ಮುಚ್ಒಡೆವ ಕಂಗಳಲ್ಲಿ...
ಹೊಸ ಹೆಜ್ಜೆ ಬಾಳಿನಲಿ
ಹಳೆ ಹಕ್ಕಿ ಬಾನಿನಲಿ
ಸಂಭ್ರಮದ ಚಿಲಿಪಿಲಿ ಎಲ್ಲೆಡೆಯಲಿ
ಕುತೂಹಲದ ಸಾಂಗತ್ಯ ಜೊತೆ ಜೊತೆಯಲಿ
 ನಿಮಿಷ  ನಿಮಿಶಕು ಚೈತ್ರ
ನನ್ನೆದೆಯಲಿ............
                                                 
ಕಾಡಿರದೆ  ಒಂದಿನಿತೂ....???

ಬರಿ ಕಲ್ಲುಗಳ ಬೋಳು ಬೆಟ್ಟ!
ಸಂದಿ ಗೊಂದಿಯಲ್ಲೇ ಚಿಗುರಿ ನಲಿವ
ಹಸಿರು,ಹೂವು!
ಪುಟ್ಟ ಮೆಟ್ಟಿಲುಗಳ ಅಪೂರ್ವ ಸ್ವಾಗತ..
ಪ್ರತಿ ಹೆಜ್ಜೆಗೂ ಕುತೂಹಲದ ಇಂಗಿತ!
ಸುತ್ತ ನೋಡಿದರೆ,      
ಸರ್ವಾಲಂಕಾರ ಭೂಷಿತೆ ಪೃಥ್ವಿ ದೇವಿ...! 
ಕೊಂಚ ಸಾಗಿ ಕತ್ತೆತ್ತಿದರೆ
ವಿರಾಜಮಾನ ಗೊಮ್ಮಟ ಮೂರ್ತಿ !                            
ಅದೆಷ್ಟೋ ಜನ ಪೂಜಿಸುತ್ತಿದ್ದಾರೆ,
ಬೇಡುತ್ತಿದ್ದಾರೆ, ಭಜಿಸುತ್ತಿದ್ದಾರೆ.....
ಏನಕ್ಕೂ ಏನು ಇಲ್ಲದಂತೆ
ನಿಂತಿದ್ದಾನೆ ಈತ ಎಂದಿನಂತೆ
ಮನದಲ್ಲೊಂದು ಗೊಂದಲದ ಸಂತೆ!
ಕಾಡಿರದೆ ಒಂದಿನಿತೂ ಆತನನು
ತಾನೇಕೆ ಹೀಗಾದೆನೆಂಬ ಚಿಂತೆ?...?