ಶುಕ್ರವಾರ, ಜುಲೈ 1, 2011

ಕಾನನ ಕುಸುಮ  

ಯಾವ ಆಸರೆಯಿಲ್ಲ ಅರಳಿನಿಂತಿಹುದು
ಬೇಸಿಗೆಯ ಬಿಸಿಲಲ್ಲಿ
 ವನದ ಸುಮವು..
ನೆಟ್ಟು ನೋಡಿಹರಿಲ್ಲ,
ನೀರನೆರೆದವರಿಲ್ಲ
ನಗುತಿಹುದು ನಿಸ್ಸಹಾಯಕವಾಗಿ  ಬೆಳೆದು!
ಮುದ್ದಿಸುವರಾರಿಲ್ಲ,
ಮುಡಿವವರು ಗತಿಯಿಲ್ಲ,
ಅಂದವೆಂದೆನ್ನುವರು ಸಿಗುವುದಿಲ್ಲ...
ಹೊರಳಿದರು ಕಣ್ಣೋಟ ಅರೆ ಮನದ ನೆಚ್ಚಿಗೆ!
ಚೆಂದದುತ್ತರ ಬರಿ ಮೂಗುಮುರಿತ...
ಎಷ್ಟೆಷ್ಟೋ ಮೆರೆಯುತಿವೆ ಮರೆಯಲ್ಲಿ ಕಲೆಗಳು,
ಅರಿವರಿಹರೆ ಬೇರೆ ಅವರಾಳದ ಫಲಗಳು ?
ಇರಬಹುದೇ ನೂರಲ್ಲಿ
ಹತ್ತು ಮೆಚ್ಚುವ ಮಂದಿ?
ಮಣ್ಓಳಗಿನಾ  ಮೊಳಕೆ ಮನದ ಭಾವ!
ದೀನ ಪ್ರತಿಭೆಯ ಗೋಳು 
ಮುಗಿಲ ಮಲ್ಲೆಯ ಕನಸು,
ಕಾಡಮಲ್ಲಿಗೆಯೆಡೆಗೂ ತಿರುಗಲಿ ಬೆರಳು..
ಬಡಮನದ  ಸಾಫಲ್ಯ ಕಾನನ ಕುಸುಮದಂತೆ,
ತೃಪ್ತಿ ತನ್ನೊಡಲೊಳಗೆ
ತಾನರಳುವಂತೆ ......