ಶುಕ್ರವಾರ, ಜುಲೈ 1, 2011

ಭುಜ  ಕೊಡುವೆಯಾ ?

ಭುಜ  ಕೊಡುವೆಯಾ ಗೆಳತಿ 
ನನ್ನ ಕಂಬನಿಗಳಿಗೆ ಮೌನಿಯಾಗಿ  ?
ಭಾವ ಬತ್ತಿದ ಬಿಂದುಗಳಿಗೆ ಸಾಕ್ಷಿಯಾಗಿ?
ತುತಿಯೆರಡು ಮಾಡದಿರು...
ಪ್ರವಾಹ ಬಂದುಬಿಡಲಿ,
ನನ್ನೆದೆಯ ಮಣ್ಣ ದೋಣಿ ಕರಡಿ ಬಿಡಲಿ, !
ಪ್ರಯತ್ನಿಸದಿರು ನೀ ವಿಫಲಳಾಗಿ!   
ಸಾಧ್ಯವಿಲ್ಲೆನಗೆ,ಎನ್ನ ಕಂಗಳಿಗೆ,
ಮತ್ತೆ ಕನಸ ಹೆಣೆಯಲು,
ಮುತ್ತ ಮಾಲೆ ಪೊಣಿಸಲು.,  
ಆಸೆ ಚಿತ್ರ ಬಿಡಿಸಲು...
ಭುಜ  ಕೊಡುವೆಯಾ ಗೆಳತಿ 
ನನ್ನ ಕಂಬನಿಗಳಿಗೆ ಮೌನಿಯಾಗಿ  ?
ಭಾವ ಬತ್ತಿದ ಬಿಂದುಗಳಿಗೆ ಸಾಕ್ಷಿಯಾಗಿ?


ಕಾನನ ಕುಸುಮ  

ಯಾವ ಆಸರೆಯಿಲ್ಲ ಅರಳಿನಿಂತಿಹುದು
ಬೇಸಿಗೆಯ ಬಿಸಿಲಲ್ಲಿ
 ವನದ ಸುಮವು..
ನೆಟ್ಟು ನೋಡಿಹರಿಲ್ಲ,
ನೀರನೆರೆದವರಿಲ್ಲ
ನಗುತಿಹುದು ನಿಸ್ಸಹಾಯಕವಾಗಿ  ಬೆಳೆದು!
ಮುದ್ದಿಸುವರಾರಿಲ್ಲ,
ಮುಡಿವವರು ಗತಿಯಿಲ್ಲ,
ಅಂದವೆಂದೆನ್ನುವರು ಸಿಗುವುದಿಲ್ಲ...
ಹೊರಳಿದರು ಕಣ್ಣೋಟ ಅರೆ ಮನದ ನೆಚ್ಚಿಗೆ!
ಚೆಂದದುತ್ತರ ಬರಿ ಮೂಗುಮುರಿತ...
ಎಷ್ಟೆಷ್ಟೋ ಮೆರೆಯುತಿವೆ ಮರೆಯಲ್ಲಿ ಕಲೆಗಳು,
ಅರಿವರಿಹರೆ ಬೇರೆ ಅವರಾಳದ ಫಲಗಳು ?
ಇರಬಹುದೇ ನೂರಲ್ಲಿ
ಹತ್ತು ಮೆಚ್ಚುವ ಮಂದಿ?
ಮಣ್ಓಳಗಿನಾ  ಮೊಳಕೆ ಮನದ ಭಾವ!
ದೀನ ಪ್ರತಿಭೆಯ ಗೋಳು 
ಮುಗಿಲ ಮಲ್ಲೆಯ ಕನಸು,
ಕಾಡಮಲ್ಲಿಗೆಯೆಡೆಗೂ ತಿರುಗಲಿ ಬೆರಳು..
ಬಡಮನದ  ಸಾಫಲ್ಯ ಕಾನನ ಕುಸುಮದಂತೆ,
ತೃಪ್ತಿ ತನ್ನೊಡಲೊಳಗೆ
ತಾನರಳುವಂತೆ ......