ಶುಕ್ರವಾರ, ಜುಲೈ 1, 2011

ಭುಜ  ಕೊಡುವೆಯಾ ?

ಭುಜ  ಕೊಡುವೆಯಾ ಗೆಳತಿ 
ನನ್ನ ಕಂಬನಿಗಳಿಗೆ ಮೌನಿಯಾಗಿ  ?
ಭಾವ ಬತ್ತಿದ ಬಿಂದುಗಳಿಗೆ ಸಾಕ್ಷಿಯಾಗಿ?
ತುತಿಯೆರಡು ಮಾಡದಿರು...
ಪ್ರವಾಹ ಬಂದುಬಿಡಲಿ,
ನನ್ನೆದೆಯ ಮಣ್ಣ ದೋಣಿ ಕರಡಿ ಬಿಡಲಿ, !
ಪ್ರಯತ್ನಿಸದಿರು ನೀ ವಿಫಲಳಾಗಿ!   
ಸಾಧ್ಯವಿಲ್ಲೆನಗೆ,ಎನ್ನ ಕಂಗಳಿಗೆ,
ಮತ್ತೆ ಕನಸ ಹೆಣೆಯಲು,
ಮುತ್ತ ಮಾಲೆ ಪೊಣಿಸಲು.,  
ಆಸೆ ಚಿತ್ರ ಬಿಡಿಸಲು...
ಭುಜ  ಕೊಡುವೆಯಾ ಗೆಳತಿ 
ನನ್ನ ಕಂಬನಿಗಳಿಗೆ ಮೌನಿಯಾಗಿ  ?
ಭಾವ ಬತ್ತಿದ ಬಿಂದುಗಳಿಗೆ ಸಾಕ್ಷಿಯಾಗಿ?


ಕಾನನ ಕುಸುಮ  

ಯಾವ ಆಸರೆಯಿಲ್ಲ ಅರಳಿನಿಂತಿಹುದು
ಬೇಸಿಗೆಯ ಬಿಸಿಲಲ್ಲಿ
 ವನದ ಸುಮವು..
ನೆಟ್ಟು ನೋಡಿಹರಿಲ್ಲ,
ನೀರನೆರೆದವರಿಲ್ಲ
ನಗುತಿಹುದು ನಿಸ್ಸಹಾಯಕವಾಗಿ  ಬೆಳೆದು!
ಮುದ್ದಿಸುವರಾರಿಲ್ಲ,
ಮುಡಿವವರು ಗತಿಯಿಲ್ಲ,
ಅಂದವೆಂದೆನ್ನುವರು ಸಿಗುವುದಿಲ್ಲ...
ಹೊರಳಿದರು ಕಣ್ಣೋಟ ಅರೆ ಮನದ ನೆಚ್ಚಿಗೆ!
ಚೆಂದದುತ್ತರ ಬರಿ ಮೂಗುಮುರಿತ...
ಎಷ್ಟೆಷ್ಟೋ ಮೆರೆಯುತಿವೆ ಮರೆಯಲ್ಲಿ ಕಲೆಗಳು,
ಅರಿವರಿಹರೆ ಬೇರೆ ಅವರಾಳದ ಫಲಗಳು ?
ಇರಬಹುದೇ ನೂರಲ್ಲಿ
ಹತ್ತು ಮೆಚ್ಚುವ ಮಂದಿ?
ಮಣ್ಓಳಗಿನಾ  ಮೊಳಕೆ ಮನದ ಭಾವ!
ದೀನ ಪ್ರತಿಭೆಯ ಗೋಳು 
ಮುಗಿಲ ಮಲ್ಲೆಯ ಕನಸು,
ಕಾಡಮಲ್ಲಿಗೆಯೆಡೆಗೂ ತಿರುಗಲಿ ಬೆರಳು..
ಬಡಮನದ  ಸಾಫಲ್ಯ ಕಾನನ ಕುಸುಮದಂತೆ,
ತೃಪ್ತಿ ತನ್ನೊಡಲೊಳಗೆ
ತಾನರಳುವಂತೆ ......
  




ಗುರುವಾರ, ಜೂನ್ 30, 2011

 ಮತ್ತಿನ್ನೇನಿದೆ 
ಬೇಸಿಗೆಯ ಬಡ ನೆಲ ಮನಸು,
ಒಂದಿಷ್ಟು ಕಳವಳ ಕುತೂಹಲ
 ಕಾರ್ಮೋಡಗಳ  ಕಂಡು....
ತಿಳಿಯದ ತಂಗಾಳಿಯ ಸನ್ನೆ,
ಆಗಾಗ ಮೊಳಗಿ ಮರೆಯಾಗುವ
ಗುಡುಗು ಮಿಂಚುಗಳ ಜಾಗಟೆ 
ಪ್ರೀತಿ ಮಾತಂತೆ 
ಇಳೆಗೆ ಮೊದಲ ಮಳೆ !
ಹಸಿರು ಎಲ್ಲೆಡೆ ಚಿಗುರಿತು 
ಮನದ ಮಂದಾರ ಅರಳಿತು!
ಮತ್ತಿನ್ನೇನಿದೆ???
ಬಿರುಬೇಸಿಗೆಯಂತೂ ದೂರಾಗತೊಡಗಿದೆ
ಬೆರಳೆಣಿಕೆಯೊಂದೇ ಬಾಕಿ,
ಸುರಿವ ಕನಸ ಮುಂಗಾರಿಗೆ....

ಶುಕ್ರವಾರ, ಜೂನ್ 10, 2011

nimisha nimishaku

ನಿಮಿಷ  ನಿಮಿಶಕು .......
ನಿಮಿಷ  ನಿಮಿಶಕು ಚೈತ್ರ
ನನ್ನೆದೆಯ ಭುವಿಯಲ್ಲಿ
ಚಿಗುರಿ ನಲಿದಿದೆ ಕನಸು
ಸುತ್ತೆಲ್ಲ ಜಾಗದಲಿ
ಹೂವರಳಿದಾ ಘಮವು
ಪ್ರತಿಯುಸಿರ  ತಾಳದಲಿ
ಜೇನ್  ಗಾನ  ಸಂಭ್ರಮದ
ಸವಿ ಬೆರಗು; 
ಅಚ್ಚರಿ ಸೊಬಗು...
ಪ್ರತಿ ಸಲಕು ಮುಚ್ಒಡೆವ ಕಂಗಳಲ್ಲಿ...
ಹೊಸ ಹೆಜ್ಜೆ ಬಾಳಿನಲಿ
ಹಳೆ ಹಕ್ಕಿ ಬಾನಿನಲಿ
ಸಂಭ್ರಮದ ಚಿಲಿಪಿಲಿ ಎಲ್ಲೆಡೆಯಲಿ
ಕುತೂಹಲದ ಸಾಂಗತ್ಯ ಜೊತೆ ಜೊತೆಯಲಿ
 ನಿಮಿಷ  ನಿಮಿಶಕು ಚೈತ್ರ
ನನ್ನೆದೆಯಲಿ............
                                                 
ಕಾಡಿರದೆ  ಒಂದಿನಿತೂ....???

ಬರಿ ಕಲ್ಲುಗಳ ಬೋಳು ಬೆಟ್ಟ!
ಸಂದಿ ಗೊಂದಿಯಲ್ಲೇ ಚಿಗುರಿ ನಲಿವ
ಹಸಿರು,ಹೂವು!
ಪುಟ್ಟ ಮೆಟ್ಟಿಲುಗಳ ಅಪೂರ್ವ ಸ್ವಾಗತ..
ಪ್ರತಿ ಹೆಜ್ಜೆಗೂ ಕುತೂಹಲದ ಇಂಗಿತ!
ಸುತ್ತ ನೋಡಿದರೆ,      
ಸರ್ವಾಲಂಕಾರ ಭೂಷಿತೆ ಪೃಥ್ವಿ ದೇವಿ...! 
ಕೊಂಚ ಸಾಗಿ ಕತ್ತೆತ್ತಿದರೆ
ವಿರಾಜಮಾನ ಗೊಮ್ಮಟ ಮೂರ್ತಿ !                            
ಅದೆಷ್ಟೋ ಜನ ಪೂಜಿಸುತ್ತಿದ್ದಾರೆ,
ಬೇಡುತ್ತಿದ್ದಾರೆ, ಭಜಿಸುತ್ತಿದ್ದಾರೆ.....
ಏನಕ್ಕೂ ಏನು ಇಲ್ಲದಂತೆ
ನಿಂತಿದ್ದಾನೆ ಈತ ಎಂದಿನಂತೆ
ಮನದಲ್ಲೊಂದು ಗೊಂದಲದ ಸಂತೆ!
ಕಾಡಿರದೆ ಒಂದಿನಿತೂ ಆತನನು
ತಾನೇಕೆ ಹೀಗಾದೆನೆಂಬ ಚಿಂತೆ?...?

ಮಂಗಳವಾರ, ಜೂನ್ 7, 2011

ಬಾ ಕಲ್ಪನಾ
ಬಾರೆ ಬಾರೆಲೇ ನಿ ಬಾರೆ ನನ್ನಯ ಜೊತೆಗೆ
ಹೋಗೋಣ ನಾವು ಬೆಳದಿಂಗಳನ್ಗಳಕೆ 
ನಾಚಿಕೆಯ ಪರದೆಯನು ಕಿತ್ತೋಗೆದ ಚಂದಿರನ 
ನಾಚಿಸಲು ಹೋಗೋಣ 
ಬಾ ಕಲ್ಪನಾ... 

ಬಾನಂಗಳದಲ್ಲಿ ಚೆಲ್ಲಿದೆ, ಹರಡಿದೆ
ಬೆಳ್ಳಿ ಲೆಪನದಾ ಹತ್ತಿ ಹಾಸು
ಅಲ್ಲಲ್ಲಿ ಮಿನುಗುವಾ ಉರಗ ನಯನದ ಕಾಂತಿ
ಇನ್ನೇನೋ ನೋಡೋಣ
ಬಾ ಕಲ್ಪನಾ...

ಅಲ್ಲಿ ಇದೆಯಂತೆ,ನಿಶ್ಯಬ್ದ ಗಾನ ಬೀರುವ ಕೊಳಲು
ಮೌನವೀಣೆಯ ಮಿಡಿತ 
ಹೃದಯ ಮೃದಂಗ...
ಬಾ ನಾವು ಹೋಗೋಣ ,ಕೇಳೋಣ ಮೆರೆಯೋಣ
ನಮ್ಮನದ ಆಂಗನದ ದಿವ್ಯ ಗಾನ...





ಮಳೆರಾಯನ ಬರುವಿಕೆಗೆ...

ಎಲ್ಲ  ಮರಗಿಡಗಳೂ ಹೊಸಬಟ್ಟೆ ಧರಿಸಿವೆ
ಕೆಲುವೊಂದು ಎಳೆ ಚಿಗುರು
ಕೆಲುವೊಂದು  ತಿಳಿ ಹಸಿರು
ಕೆಲುವರಂಗಿಗೋ ಬಣ್ಣ ಬಣ್ಣದ ಚಿತ್ತಾರ
ಕೆಲುವರಂಗಿಗೆ  ಬೆಂಕಿ ತಗುಲಿದಂತೆ...
ಕೆಲುವರಂಗಿಗೆ ಧೂಳು ಧೂಮಗಳ ಮುಚ್ಚಿಗೆ
ಕೆಲುವರಂಗಿಗೆ ಸೊಂಪು ತಂಪಿನಿಬ್ಬನಿ   ಸ್ನಾನ
ಕೆಲುವರಂಗಿಗೆ ಎಳೆಗಳೆದು ಹೊಗೊತಲಿವೆ !
ಕೆಲುವರಂಗಿಗೆ ಚಿತ್ರ ವಿಚಿತ್ರ ಕಾಲ...
ಕೆಲವು ಮುಸ್ಸಂಜೆ ಮುಂಜಾವಿನಲ್ಲೊಮ್ಮೊಮ್ಮೆ ,
ಧರಿಸುವವು ಕೆಂಪನೆಯ ಕೆಮ್ಮಡಿಯನು...
ಕೆಲುವರಂಗಿಗೆ ಅತ್ತರದ ಕಂಪಿನಾಲಂಪು
ಕೆಲುವರಂಗಿಯ ಮೇಲೆ ಕೂ ದನಿಯ ಇಂಪು !
ಕೆಲುವರಂಗಿಯ ಚುಂಬಿಸ ಬಂದ ಜೇನ್ನೊಣಗಳು
ಕೆಲುವರಂಗಿಗೆ ಕೊಳೆವ ಕಾಲ ಭೀತಿ !!!!
ಹಲವರಂಗಿಯ ಮೇಲುಲಿವ  ಬಾನಾಡಿಗಳು
ಕೆಲುವರಂಗಿಗೆ ಹೊಲಿಗೆ ಮುಗಿದಿಲ್ಲವಿನ್ನೂ
ಎಲ್ಲರಿಗು ದಿರಿಸ ತಾನಿತ್ತಿಹಳು ಮಹಾತಾಯಿ
ಉಟ್ಟಿಹಳು ತಾ ಬಣ್ಣ ಬಣ್ಣದ ಉಡಿಗೆ
ಕೊಂಚ ಸಿಂಗಾರ ಮಿಕ್ಕಿಹುದು ಎಂದು
ಬರಮಾಡಿಕೊಳುತಿಹಳು ಮಳೆರಾಯನಾ....