ಕಾನನ ಕುಸುಮ
ಯಾವ ಆಸರೆಯಿಲ್ಲ ಅರಳಿನಿಂತಿಹುದು
ವನದ ಸುಮವು..
ನೆಟ್ಟು ನೋಡಿಹರಿಲ್ಲ,
ನೀರನೆರೆದವರಿಲ್ಲ
ನಗುತಿಹುದು ನಿಸ್ಸಹಾಯಕವಾಗಿ ಬೆಳೆದು!
ಮುದ್ದಿಸುವರಾರಿಲ್ಲ,
ಮುಡಿವವರು ಗತಿಯಿಲ್ಲ,
ಅಂದವೆಂದೆನ್ನುವರು ಸಿಗುವುದಿಲ್ಲ...
ಚೆಂದದುತ್ತರ ಬರಿ ಮೂಗುಮುರಿತ...
ಎಷ್ಟೆಷ್ಟೋ ಮೆರೆಯುತಿವೆ ಮರೆಯಲ್ಲಿ ಕಲೆಗಳು,
ಅರಿವರಿಹರೆ ಬೇರೆ ಅವರಾಳದ ಫಲಗಳು ?
ಇರಬಹುದೇ ನೂರಲ್ಲಿ
ಹತ್ತು ಮೆಚ್ಚುವ ಮಂದಿ?
ಮಣ್ಓಳಗಿನಾ ಮೊಳಕೆ ಮನದ ಭಾವ!
ದೀನ ಪ್ರತಿಭೆಯ ಗೋಳು
ಮುಗಿಲ ಮಲ್ಲೆಯ ಕನಸು,
ಕಾಡಮಲ್ಲಿಗೆಯೆಡೆಗೂ ತಿರುಗಲಿ ಬೆರಳು..
ಬಡಮನದ ಸಾಫಲ್ಯ ಕಾನನ ಕುಸುಮದಂತೆ,
ತೃಪ್ತಿ ತನ್ನೊಡಲೊಳಗೆ
ತಾನರಳುವಂತೆ ......